ಮಧ್ಯಯುಗದಲ್ಲಿ ಆಧುನಿಕ ರೀತಿಯ ಬ್ಯಾಂಕು ವ್ಯವಸ್ಥೆ ಇರಲಿಲ್ಲ. ಬಡ್ಡಿಗೆ ಸಾಲ ಕೊಡುವ ವ್ಯವಸ್ಥೆ ನೀತಿಬಾಹಿರ ಹಾಗೂ ಕಾನೂನುಬಾಹಿರವಾಗಿದ್ದುದರಿಂದ ಆಧುನಿಕ ರೀತಿಯ ಬ್ಯಾಂಕ್ ವ್ಯವಸ್ಥೆ ಸಾಧ್ಯವಿರಲಿಲ್ಲ. (ಕುಸೀದ-ಪದ್ಧತಿ) ಅಕ್ಕಸಾಲಿಗರ ಬಳಿಯಲ್ಲಿ ಭದ್ರ ಕೋಣೆಗಳೂ ತಿಜೋರಿಗಳೂ ಇರುತ್ತಿದ್ದುದರಿಂದ ಅವರ ಗ್ರಾಹಕರು ತಮ್ಮಲ್ಲಿದ್ದ ಚಿನ್ನಬೆಳ್ಳಿ ನಾಣ್ಯಗಳನ್ನು ಕೊಂಡೊಯ್ದು ಅಕ್ಕಸಾಲಿಗರಲ್ಲಿ ಇಡುತ್ತಿದ್ದರು. ಇವನ್ನು ಪಡೆದ ಅಕ್ಕಸಾಲಿಗರು ಕೇಳಿದಾಗ ಹಿಂತಿರುಗಿಸುವ ವಾಗ್ದಾನ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಅವರು ತಮ್ಮ ಗ್ರಾಹಕರಿಂದ ಶುಲ್ಕ ಪಡೆಯುತ್ತಿದ್ದರು. ಅವರು ನಂಬಿಕೆಗೆ ತಕ್ಕಂತೆ ನಡೆದುಕೊಳ್ಳುವುದು ಹೆಚ್ಚಿದಂತೆಲ್ಲ ಇದನ್ನೂ ಒಂದು ವ್ಯಾಪಾರವಾಗಿ ಮಾಡಿಕೊಂಡರು. ಅವರು ಪಡೆದ ಠೇವಣಿಗೆ ಪ್ರತಿಯಾಗಿ ಕೊಡುತ್ತಿದ್ದ ರಸೀತಿಗಳು ಹಣದಂತೆಯೇ ನಂಬಿಕೆಗೆ ಪಾತ್ರವಾಗಿ ಕೈಯಿಂದ ಕೈಗೆ ಸಂಚರಿಸಲು ಪ್ರಾರಂಭಿಸಿದುವು. ಅವರು ತಮ್ಮದೇ ಆದ ಅನೇಕ ಬಗೆಯ ಕಾಗದದ ಹಣವನ್ನು ಆವಿಷ್ಕರಿಸಿದ್ದರು. ಅವುಗಳಲ್ಲಿ ಮುಖ್ಯವಾದುವೆಂದರೆ ಚೆಕ್ಕುಗಳು ಮತ್ತು ಬ್ಯಾಂಕುನೋಟುಗಳು (ಅಕ್ಕಸಾಲಿಗರ-ಉದ್ಯಮ).

ಆದರೆ ಕೆಲವು ಅಕ್ಕ-ಸಾಲಿಗ-ಬ್ಯಾಂಕುಗಳ ಆರ್ಥಿಕ ವ್ಯವಹಾರ ಕೆಡಲಾರಂಭಿಸಿತು. 1670ರಲ್ಲಿ ತೀವ್ರವಾದ ಆರ್ಥಿಕ ಬಿಕ್ಕಟ್ಟು ಒದಗಿ ಇಂಥ ಬ್ಯಾಂಕುಗಳ ವಿಷಯದಲ್ಲಿ ಜನರ ನಂಬಿಕೆ ಕಡಿಮೆಯಾಯಿತು. ಜನರು ವ್ಯವಸ್ಥಿತವಾದ ಬ್ಯಾಂಕಿನ ಆವಶ್ಯಕತೆಯ ಬಗ್ಗೆ ಬೇಡಿಕೆ ಸಲ್ಲಿಸಲಾರಂಭಿಸಿದರು. 1688ರ ಕ್ರಾಂತಿಯ ಅನಂತರ 1694ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಅಸ್ತಿತ್ವಕ್ಕೆ ಬಂತು (ಇಂಗ್ಲೆಂಡಿನ-ಬ್ಯಾಂಕು).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ